"ಮರುದೇವಿ ಅಮ್ಮ" ತನ್ನ ಮತ್ತು ತನ್ನಿಬ್ಬರು ಮಕ್ಕಳೊಂದಿಗೆ, ಬೊಳ್ಳಾರಿನ ಚಂದಯ್ಯ ಕೊಟ್ಟಾರಿಯವರ ಮನೆಯಿಂದ ಹೊರಟು, ತಮ್ಮ ತಂದೆಯವರ ಸ್ನೇಹಿತರಾದ ಇಚಿಲಂಪಾಡಿಯ ಪುರೋಹಿತರ ಮನೆಗೆ ಬಂದರು. ಪುರೋಹಿತರಿಗೆ ಸ್ವಲ್ಪ ಜಮೀನು ಇತ್ತು. ಆದರೆ ವಯೋವೃದ್ಧರಾದ ಪುರೋಹಿತರಿಗೆ ಆ ಜಮೀನನ್ನು ಸಾಗುವಳಿ ಮಾಡಿಸಲು ಸಾಧ್ಯ ಆಗುತ್ತಿರಲಿಲ್ಲ.
ಮರುದೇವಿಯವರು, ಪುರೋಹಿತರ,
ಹಡಿಲು ಗದ್ದೆಯನ್ನು ಗೇಣಿಗೆ ವಹಿಸಿಕೊಂಡು ಕೆಲಸದವರ ಸಹಾಯದಿಂದ ಅದರಲ್ಲಿ ಭತ್ತ ದಾನ್ಯ ಮತ್ತು ತರಕಾರಿ ಬೆಳೆಸಿದರು. ಜೀವನ ಹೇಗೋ ತಕ್ಕಮಟ್ಟಿಗೆ ಸಾಗುತಿತ್ತು. ಆದರೆ ಕೆಲವು ಸಮಯದಿಂದ ಮಗ 'ಶಾಂತಿ' ಎಲ್ಲಿದ್ದಾನೋ ತುಂಬಾ ದಿನದಿಂದ ತನ್ನ ಸಂಪರ್ಕದಲ್ಲಿ ಇಲ್ಲ. ಎಲ್ಲಿದ್ದಾನೋ ಸುಳಿವೇ ಇಲ್ಲ, ಎಂದು ಈಕೆ ಗಾಬರಿಗೊಳ್ಳುತ್ತಿದ್ದರು. ಮತ್ತೆ ಅದೇ ಕ್ಷಣ ಜೀವನದ ಈ ಕಷ್ಟದ ಸಮಯದಲ್ಲಿ ಆತ ನನ್ನಿಂದ ದೂರದಲ್ಲಿ ಇದ್ದರು, ಎಲ್ಲೊ ಮಡಿಕೇರಿ ಕಡೆ ಇದ್ದಾನಂತೆ ಎಲ್ಲಾದರೂ ಸುಖವಾಗಿರಲಿ, ಅಂದುಕೊಳ್ಳುತ್ತಿದ್ದರು.
ಆದರೆ ಎಷ್ಟಾದರೂ ಬೆಳೆದುನಿಂತ ಮಗ ತನ್ನ ಬಳಿಯಲ್ಲಿ ಇಲ್ಲ, ಅನ್ನುವ ಕೊರಗು ಆ ಮಾತೃ ಹೃದಯಕ್ಕೆ ಸದಾಕಾಲ ಕಾಡುತಿತ್ತು.
ಮಗನಿಗೆ ಮೂವತ್ತರ ಹರೆಯವಾದರೂ ಮದುವೆ ಮಾಡಿಸಲು ಸಾಧ್ಯ ಆಗಲೇ ಇಲ್ಲ. ಅನ್ನುವ ಚಿಂತೆ ಆ ಮಾತೃ ಹೃದಯಕ್ಕೆ ಸದಾ ಕಾಲ ಕಾಡುತಿತ್ತು.
ಹೆಣ್ಣು ಮಕ್ಕಳು ಕೂಡ ಬೆಳೆಯುತ್ತಾ ಇದ್ದಾರೆ. ಮುಂದೆ ಅವರಿಗೂ ಮದುವೆ ಮಾಡಿಸಬೇಕು. ಅಲೆಮಾರಿ ಜೀವನದಿಂದ ಮಕ್ಕಳ ವಿದ್ಯಾಭ್ಯಾಸವಂತೂ ಅರ್ಧಕ್ಕೆ ನಿಂತು ಹೋಗಿದೆ.
ಈ ಎಲ್ಲಾ ವಿಷಯಗಳು ಮರುದೇವಿಯವರ ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು.
ಹೀಗಿರುವಾಗ,
ಒಂದು ದಿನ ಮುಂಜಾನೆ,
ದೂರದಲ್ಲಿ ಎತ್ತಿನ ಗಾಡಿಯೊಂದು ಬರುವುದು ಕಾಣಿಸುತ್ತಿದೆ. ಎತ್ತಿನ ಗಾಡಿ ಇವರಿರುವ ಮನೆಯೆದುರು ಬಂದು ನಿಂತಿತು.
ಗಾಡಿಯಿಂದ ಇವರ ದೂರದ
ಸಂಬಂಧಿಕರಿಬ್ಬರು ಇಳಿದರು.
ನೇರವಾಗಿ ಇವರ ಬಳಿ ಬಂದವರೇ, ''ನಿಮ್ಮ ಮಗ ಕೆಲವು ದಿನಗಳಿಂದ ಸ್ವಲ್ಪ ಅಸೌಖ್ಯದಿಂದ ಇದ್ದಾನೆ. ಈಗ ನಾವು ಕರೆದುಕೊಂಡು ಬಂದಿದ್ದೇವೆ. ಗಾಡಿಯಲ್ಲಿ ಮಲಗಿದ್ದಾನೆ, "ಎಂದರು.
ಗಾಬರಿಗೊಂಡ ಮರುದೇವಿಯಮ್ಮ, " ಏನಾಯಿತು ಎಲ್ಲಿದ್ದಾನೆ ನನ್ನ ಮಗ "ಎಂದು ಗಾಡಿಯತ್ತ ಓಡಿದರು.
ಎತ್ತಿನ ಗಾಡಿಯೊಳಗಡೆ ಮಗನನ್ನು ಅಂಗಾತವಾಗಿ ಮಲಗಿಸಲಾಗಿತ್ತು.
ಮಗ ತಲೆ ಎತ್ತಿಯು ನೋಡುತ್ತಿಲ್ಲ.
ಮಗನ ಆ ಪರಿಸ್ಥಿಯನ್ನು ನೋಡಿ ಮರುದೇವಿಯಮ್ಮ 'ಕಂದಾ' ಎಂದು ಜೋರಾಗಿ ಕರೆದು ಅತ್ತರು.
ಮಗನನ್ನು, ಎಲ್ಲರು ಸೇರಿ ಗಾಡಿಯಿಂದ ಮೆಲ್ಲಗೆ ಇಳಿಸಿ, ಎತ್ತಿಕೊಂಡು ಬಂದು ಮನೆಯೊಳಗಡೆ ತಂದು ಮಲಗಿಸಿದರು.
ಮಗನನ್ನು ಕರೆತಂದ ದೂರದ ಸಂಬಂದಿಕರು, ಮರುದೇವಿಯಮ್ಮನವರಲ್ಲಿ, "ನಿಮ್ಮ ಮಗನಿಗೆ ಸ್ವಲ್ಪ ಜ್ವರ ಬಂದಿತ್ತು. ಈಗ ಸ್ವಲ್ಪ ಸುಧಾರಿಸಿದ್ದಾನೆ, ಮದ್ದಿನ ಅಮಲಿನಲ್ಲಿ ಈಗ ಸ್ವಲ್ಪ ನಿದ್ದೆಯಲ್ಲಿ ಇರಬಹುದು. ಗುಣಮುಖನಾಗುತ್ತಾನೆ ನೀವು ಚಿಂತಿಸಬೇಡಿ. ಹಾಗೇನಾದರೂ ಸಮಸ್ಯೆ ಇದ್ದಲ್ಲಿ ನಾವಿದ್ದೇವೆ.
ಈಗ ತುರ್ತು ಕೆಲಸ ಇರುವುದರಿಂದ ನಾವು ಹೊರಡುತ್ತೇವೆ, " ಎಂದು ಹೊರಟು ಹೋದರು.
ಮಗ ಶಾಂತಿರಾಜ ಮಲಗಿದಲ್ಲಿಂದ ಎದ್ದು ಕೂರಲು ಆಗುತ್ತಿಲ್ಲ. ಸರಿಯಾಗಿ ಮಾತನಾಡಲು ಸಾಧ್ಯ ಆಗುತ್ತಿಲ್ಲ. ಜ್ಞಾನ ಶಕ್ತಿ ಕುಂಠಿತವಾದಂತಿದೆ. ಕೆಲವೊಮ್ಮೆ ಅಪಸ್ಮಾರ ಬಂದವರಂತೆ ಆಡುತ್ತಾನೆ.
ಸರಿಯಾಗಿ ಆಹಾರವನ್ನು ಸೇವಿಸುತ್ತಿಲ್ಲ.
ಏನಾಯಿತು ಇವನಿಗೆ ಎಂದು ತಾಯಿ ಮತ್ತು ತಂಗಿಯಂದಿರು ಗಾಬರಿಗೊಳ್ಳುತ್ತಿದ್ದರು.
ಮತ್ತದೇ ಕ್ಷಣದಲ್ಲಿ, ಈ ಹಿಂದೆಯು ಜಾಂಡಿಸ್ ಖಾಯಿಲೆ ಇದ್ದುದ್ದರಿಂದ ಆರೋಗ್ಯದಲ್ಲಿ ಆಗಾಗ,ಏರುಪೇರು ಆಗುತ್ತಾ ಇದ್ದುದರಿಂದ, ಅವನು ನಿಧಾನಕ್ಕೆ ಸುಧಾರಿಸಿ ಕೊಳ್ಳಬಹುದು ಎಂದು ಕೊಂಡರು.
ಆದರೆ ವಾತ್ಸವ ಸತ್ಯ ಅವರಿಗೇನು ಗೊತ್ತು, ಪಾಪ.... !
(ಮುಂದುವರಿಯುತ್ತದೆ)
ಕಾಮೆಂಟ್‌ಗಳು