ಆಕೆ ಮರುದೇವಿ ಅಮ್ಮ. ಜೈನರ ಅಳಿಯ ಸಂತಾನದ ಶ್ರೀಮಂತ ಜಮೀನ್ದಾರಿ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಇವರದು ಊರಿನ ಪಟೇಲರ ಕುಟುಂಬ. ಈಕೆ ಗಟ್ಟಿಗಿತ್ತಿ, ಸ್ವಾಭಿಮಾನಿ ಹೆಂಗಸು. ಛಲ ಧೈರ್ಯ ಹಠಗಳಿಗೆ ಇನ್ನೊಂದು ಹೆಸರೇ 'ಮರುದೇವಿಯಮ್ಮ' ಎಂಬಂತೆ ಇತ್ತು ಅವರ ವ್ಯಕ್ತಿತ್ವ.
ತನ್ನ ಜೀವನದುದ್ದಕ್ಕೂ ಅಂದಿನ ಪುರುಷ ಪ್ರದಾನ ಸಮಾಜದಲ್ಲಿ, ತಾನು ಯಾವುದೇ ಪುರುಷರಿಗೆ ಕಮ್ಮಿ ಇಲ್ಲ ಎಂಬಂತೆ ಜೀವಿಸಿದಾಕೆ.
ಪಟೇಲರ ಕುಟುಂಬದಲ್ಲಿ ಹುಟ್ಟಿದ ಈಕೆ, ಪುರುಷರಿಗೆ ಮೀಸಲಾಗಿದ್ದ ಊರಿನ 'ಪಟೇಲರ' ಹುದ್ದೆಯನ್ನು ಮಹಿಳೆಯರಿಗ್ಯಾಕೆ ಕೊಡಬಾರದು ಎಂದು ಹೋರಾಟ ಮಾಡಿದಾಕೆ. ಮಾತ್ರವಲ್ಲದೆ ಒಂದೊಮ್ಮೆ ಪಟೇಲ ಹುದ್ದೆಗಾಗಿ ಅರ್ಜಿಯನ್ನು ಸಲ್ಲಿಸಿದಾಕೆ.
ಇವರ ಈ ನಡೆ ಇವರ ಆ ದೊಡ್ಡ ಅವಿಭಕ್ತ ಕುಟುಂಬದ, ಮನೆಯ ಪುರುಷ ಮತ್ತು ಮಹಿಳಾ ಸದಸ್ಯರೆಲ್ಲರಿಗು ಸಹಿಸಲಸಾಧ್ಯವಾಗಿತ್ತು. ಆದರೆ, ಈಕೆಯದು ಅದಾವುದಕ್ಕೂ ಅಂಜುವ ವ್ಯಕ್ತಿತ್ವವಾಗಿರಲಿಲ್ಲ.
ಇವರ ಒಬ್ಬನೇ ಗಂಡು ಮಗ 'ಶಾಂತಿ' ಯಾನೆ "ಶಾಂತಿರಾಜ" ಈ ಕಥೆಯ ದುರಂತ ಕಥಾನಾಯಕ.
ಆಗಿನ ಬ್ರಿಟಿಷ್ ಸರಕಾರದ ಅಧಿಕಾರಿಗಳು, ಕಾರ್ಯ ನಿಮಿತ್ತ ಪಟೇಲರ ಮನೆಗೆ ಭೇಟಿ ನೀಡುತ್ತಿದ್ದರು.
ಒಮ್ಮೆ "ಶಾಂತಿ" ಮಗುವಾಗಿದ್ದ ಸಂದರ್ಭದಲ್ಲಿ, ಒಬ್ಬ ಉನ್ನತ ಮಟ್ಟದ ಬ್ರಿಟೀಷ್ ಅಧಿಕಾರಿ ಇವರ ಮನೆಗೆ ಬಂದಿದ್ದರು. ಮದ್ಯಾಹ್ನದ ಹೊತ್ತು ಊಟ ಉಪಚಾರ ಮುಗಿಸಿ, ಮನೆಯ ಚಾವಡಿಯಲ್ಲಿ ಮರದ ಕುರ್ಚಿಯಲ್ಲಿ ಕುಳಿತು ಮೇಜಿನಲ್ಲಿ ದಾಖಲೆಗಳನ್ನು ಹರಡಿ ಏನನ್ನೋ ಪರಿಶೀಲಿಸುತ್ತಿದ್ದರು. ಆಗ ಮರುದೇವಿಯಮ್ಮನ ಪುಟ್ಟ ಮಗ 'ಶಾಂತಿ' ಮೆಲ್ಲನೆ ಅಂಬೆಗಾಲು ಇಡುತ್ತ, ಕುಳಿತಿದ್ದ ಅಧಿಕಾರಿಯ ಬಳಿಗೆ ಬಂದು ಅವರ ಲೇಖನಿಯನ್ನು ಕಿತ್ತುಕೊಂಡ. ಆಗ ತಾಯಿ ಮರುದೇವಿ ಅವರು ಒಳಗಿನಿಂದ ಬೇಗನೆ ಓಡಿ ಬಂದು ಮಗುವಿನ ಕೈಯಲ್ಲಿದ್ದ ಲೇಖನಿಯನ್ನು ಮೃದುವಾಗಿ ತೆಗೆದು ಮೇಜಿನ ಮೇಲಿಟ್ಟು ಮಗುವನ್ನು ಎತ್ತಿಕೊಂಡರು.
ಆಗ, ಆ ಅಧಿಕಾರಿಯು ಮುದ್ದಾದ ಗಂಡು ಮಗುವನ್ನು ನೋಡಿ ಸಂತೋಷಗೊಂಡು ಮರುದೇವಿ ಅವರಲ್ಲಿ "ಮಗುವಿನ ಹೆಸರೇನು" ಎಂದು ಕೇಳಿದರು.
ಆಗ ಇವರು ಮುಗುಳು ನಗುತ್ತಾ ಹೆಮ್ಮೆಯಿಂದ "ಶಾಂತಿರಾಜ" ಎಂದರು.
ಅಷ್ಟಕ್ಕೆ ಸುಮ್ಮನಿರದ ಆ ಅಧಿಕಾರಿ. "ನಿಮ್ಮಲ್ಲಿ ಎಲ್ಲರ ಹೆಸರಿನ ಜೊತೆ ಹೆಚ್ಚಾಗಿ "ರಾಜ" ಎಂದು ಯಾಕೆ ಇಡುತ್ತೀರಿ" ಎಂದು ಕೇಳಿದರು.
ಈ ಮಾತು ಯಾಕೊ ಮರುದೇವಿಯವರಿಗೆ ಇಷ್ಟವಾಗಲಿಲ್ಲ. ಅದಕ್ಕೆ ಮರುದೇವಿಯವರು "ನಮ್ಮದು ರಾಜರ ವಂಶ, ಹಾಗಾಗಿ ನಮ್ಮಲ್ಲಿ ಹುಟ್ಟಿದವರೆಲ್ಲರು ರಾಜ ಎಂದು ಕರೆಯಲ್ಪಡುತ್ತಾರೆ " ಎಂದು ಕಟುವಾಗಿ ನುಡಿದು, ಮಗುವನ್ನು ಎತ್ತಿಕೊಂಡು ಮನೆಯ ಒಳಗೆ ನಡೆದರು. ಈ ಮಾತು ಎಷ್ಟೊಂದು ಕಟುವಾಗಿ ಇತ್ತು ಎಂದರೆ,
ಸಪ್ತ ಸಾಗರದಾಚೆಯಿಂದ ವ್ಯಾಪಾರಕ್ಕೆ ಎಂದು ಬಂದು ನಂತರ ಕುತಂತ್ರದಿಂದ ನಮ್ಮವರನ್ನು ಅಡಿಯಾಳುಗಳನ್ನಾಗಿ ಮಾಡಿ ಕೊಂಡಿದ್ದ, ಬ್ರಿಟಿಷ್ ಸರಕಾರದ, ಆ ಕೆಂಪು ಮೂತಿಯ ಅಧಿಕಾರಿಗೆ ಮುಖಕ್ಕೆ ಹೊಡೆದಂತೆ ಇತ್ತು. ಇದಕ್ಕಾಗಿ ಮನೆಯ ಹಿರಿಯರು ಇವರನ್ನು ಗದರಿಸಿದ್ದರು.
'ಮರುದೇವಿ' ಅವರನ್ನು
ದೊಡ್ಡ ಆಸ್ತಿ ಇರುವ ಅನುಕೂಲಸ್ತರ ಮನೆಗೆ ವಿವಾಹ ಮಾಡಿ ಕೊಟ್ಟಿದ್ದರು. ಅನೇಕ ವರ್ಷ ನೆಮ್ಮದಿಯ ಸಂಸಾರ ಮಾಡಿದ್ದರು ಈಕೆ.
ನಂತರದಲ್ಲಿ ಪತಿ ಯಾವುದೋ ಕಾಯಿಲೆ ಬಂದು ಮೃತರಾಗಿದ್ದರು.
ಈಕೆ ಒಟ್ಟು 9 ಮಕ್ಕಳನ್ನು ಹೆತ್ತಿದ್ದರು ಖಾಯಿಲೆ ಕಸಾಲೆ ಎಂದು ಉಳಿದದ್ದು 3 ಮಕ್ಕಳು ಮಾತ್ರ.
ಹಿರಿಯವನೊಬ್ಬ ಗಂಡು ಮಗ "ಶಾಂತಿರಾಜ" ಮತ್ತಿಬ್ಬರು ಹೆಣ್ಣು ಮಕ್ಕಳು.
ಗಂಡ ಮೃತಾರಾದರೆ ಹೆಂಡತಿ ತವರು ಸೇರುವುದು ಆಗಿನ ಕಾಲದಲ್ಲಿ ವಾಡಿಕೆಯಲ್ಲಿತ್ತು. ಅದರಲ್ಲೂ ಅಳಿಯ ಸಂತಾನ ಕುಟುಂಬದಲ್ಲಿ ಈ ಪದ್ಧತಿ ಸ್ವಲ್ಪ ಹೆಚ್ಚಾಗಿಯೇ ಇತ್ತು.
ಮರುದೇವಿಯಮ್ಮನವರ ತಂದೆ, ತಾನು ಸತ್ತರೆ ತನ್ನ ಹೆಂಡತಿ ಮಕ್ಕಳು ಅನಾಥರಾಗಬಾರದೆಂದು ಇವರಿಗಾಗಿ ಬಂಟ್ವಾಳ ತಾಲೂಕಿನ ಅಮ್ಟೂರು ಎಂಬಲ್ಲಿ ಮನೆ ಮತ್ತು ಆಸ್ತಿ ಖರೀದಿಸಿ ಕೊಟ್ಟಿದ್ದರು. ತಂದೆಯ ಮರಣಾನಂತರ ತನ್ನ ತಾಯಿ ಮತ್ತು ಸಹೋದರ ಸಹೋದರಿಯರೆಲ್ಲ ಅಮ್ಟೂರಿನಲ್ಲೆ ನೆಲೆಸಿದ್ದರು. ತನ್ನ ಗಂಡನನ್ನು ಅಗಲಿದ ನಂತರ ಇವರೂ ಕೂಡ ತನ್ನ ಮಕ್ಕಳೊಂದಿಗೆ ಇದೇ ಮನೆಯಲ್ಲಿ ನೆಲೆಸಿದ್ದರು.
ಹೀಗೆ ಕಾಲ ಉರುಳಿ ಹೋಗಿತ್ತು. ಮಗ "ಶಾಂತಿ" ಬೆಳೆದು ನಿಂತಿದ್ದ. ಸಾತ್ವಿಕ ಸ್ವಭಾವದ, ಸಮಾಧಾನ ಚಿತ್ತದ, ಸುಂದರ ಯುವಕನಾಗಿದ್ದ.
ಒಮ್ಮೆ ಯಾವುದೋ ಸಣ್ಣ ವಿಷಯಕ್ಕೆ ಮರುದೇವಿ ಅಮ್ಮನಿಗೂ ಮನೆಯ ಇತರ ಹೆಂಗಸರಿಗು ಜಗಳವಾಯಿತು. ಜಗಳ ಜೋರಾಗಿ, ಆ ಹೆಂಗಸರು ಮರುದೇವಿ ಅಮ್ಮನ ವಿರುದ್ದ ಪಟೇಲರಲ್ಲಿ ದೂರಿದರು. ಇದರಿಂದಾಗಿ ಜಗಳವು ಮರುದೇವಿಯಮ್ಮ ಮತ್ತು ಅವರ ತಮ್ಮ ಪಟೇಲರ ಮದ್ಯೆ ಮುಂದುವರಿಯಿತು.
ಈ ಜಗಳದಲ್ಲಿ ಇತರರು ಉರಿವ ಬೆಂಕಿಗೆ ತುಪ್ಪ ಸುರಿಯುವಂತೆ ಕಿಚ್ಚು ಹಚ್ಚಿದರೆ ಹೊರತು ಇಬ್ಬರನ್ನು ಸಮಾಧಾನ ಪಡಿಸಲಿಲ್ಲ. ಜಗಳ ವಿಪರೀತವಾಗಿ
ಈ ಜಗಳದಲ್ಲಿ ತಮ್ಮ ನೇಮಿರಾಜರು ಇವರನ್ನು ಬೆತ್ತದಿಂದ ಮೈ ಮೇಲೆ ಬಾಸುಂಡೆ ಬರುವಂತೆ ಚೆನ್ನಾಗಿ ಹೊಡೆದಿದ್ದರು.
ತನ್ನ ಅಕ್ಕರೆಯ ತಮ್ಮ, ಪಟೇಲ 'ನೇಮಿರಾಜ' ಹೊಡೆದದ್ದರಿಂದ ಈಕೆ ಬಹಳವಾಗಿ ನೊಂದು ಕೊಂಡಿದ್ದರು. ಸುಮಾರು ಎರಡು ಮೂರು ದಿನಗಳ ಕಾಲ ಸರಿಯಾಗಿ ಊಟ ನಿದ್ದೆಯನ್ನು ಮಾಡುತ್ತಿರಲಿಲ್ಲ. ಯಾರೇ ಸಮಾಧಾನ ಪಡಿಸಿದರು, ಸ್ವತಃ ತಮ್ಮನೇ ಕ್ಷಮೆ ಕೇಳಿ ಸಮಾಧಾನ ಮಾಡಿದರು ಆಕೆ ಸಮಾಧಾನಗೊಳ್ಳಲಿಲ್ಲ.
ಆ ಸಂದರ್ಭದಲ್ಲಿ ಯುವಕನಾಗಿದ್ದ ಅವರ ಮಗ "ಶಾಂತಿ" ಆ ಘಟನೆ ಸಂದರ್ಭ ಮನೆಯಲ್ಲಿ ಇರಲಿಲ್ಲ. ಯಾರೋ ನೆಂಟರಿಷ್ಟರ ಮನೆಗೆ ಹೋಗಿದ್ದ. ಇದ್ದಿದ್ದರೂ, ತಾನು ಬಹಳವಾಗಿ ಗೌರವಿಸುತಿದ್ದ ಸೋದರಮಾವನನ್ನು ತನ್ನ ತಾಯಿಯ ಪರವಾಗಿ ನಿಂತು ಪ್ರಶ್ನಿಸುವ ಧೈರ್ಯ ಆತನಲ್ಲಿ ಇರಲಿಲ್ಲ.
ಮರುದೇವಿ ಅಮ್ಮ ತನ್ನ ಸ್ವಾಭಿಮಾನಕ್ಕೆ, ಧಕ್ಕೆ ಬಂದಿತೆಂದು ಬಹಳ ಬೇಸರಗೊಂಡು ಒಂದು ಕಟುವಾದ ದೃಢ ನಿರ್ಧಾರಕ್ಕೆ ಬಂದರು.
'ಅದು, ಆ ಮನೆಯನ್ನೇ ಬಿಟ್ಟು ಹೋಗುವ ನಿರ್ಧಾರ.'
ಒಂದು ದಿನ ರಾತ್ರಿ ಬೆಳಗಾಗುದರೊಳಗೆ ಆ ಮನೆಯಿಂದ ತನ್ನ ಎರಡು ಎಳೆಯ ಹೆಣ್ಣು ಮಕ್ಕಳೊಂದಿಗೆ ಹೊರಟು ಹೋಗಿದ್ದರು. ಜೀವಮಾನದಲ್ಲಿ ಮತ್ತೆಂದೂ ಆ ಮನೆಗೆ ಕಾಲಿಡಲಿಲ್ಲ.
ಈ ಒಂದು ಘಟನೆ ಅವರ ಬಾಳಿನ ಒಂದು ಕಹಿ ಘಟನೆ. ಮತ್ತು ಒಂದು ದೊಡ್ಡ ನಿರ್ಧಾರವಾಗಿತ್ತು.
ಈ ಘಟನೆಯಿಂದ ಅವರ ಬಾಳಿನಲ್ಲಿ ಒಂದು ಮಹತ್ತರವಾದ ತಿರುವು ಪಡೆಯಿತು.
(ಮುಂದುವರಿಯುತ್ತದೆ)...
ಕಾಮೆಂಟ್‌ಗಳು