ಮರುದೇವಿಯವರು ಒತ್ತಾಯ ಪಡಿಸಿ ಕೇಳಿದ ನಂತರ, ಕಮಲಕ್ಕ, ಮದುವೆ ಮನೆಯಲ್ಲಿ ನಡೆದ ಘಟನೆಗಳನ್ನು, ಒಂದೊಂದಾಗಿ ವಿವರಿಸತೊಡಗಿದರು.
ಮದುವೆ ಮನೆಯಲ್ಲಿ, ಸಂಭ್ರಮ ಸಡಗರ, ನೆಂಟರಿಷ್ಟರೆಲ್ಲ ಸೇರಿದ್ದರು. ಅಂತೂ ಮದುವೆಯ ಕಾರ್ಯಗಳೆಲ್ಲ ಸುಂದರವಾಗಿ ನಡೆದು ಹೋಯಿತು.
ಮಧುಮಗ ಮತ್ತು ಮಧುಮಗಳ ಊರು ಅಕ್ಕ ಪಕ್ಕದಲ್ಲೇ, ಇಬ್ಬರ ಮನೆಯವರು ಮೊದಲೇ ಪರಿಚಯಸ್ಥರು ಮತ್ತು ಸಂಬಂಧಿಕರು.
ಮದುವೆ ಮುಗಿದಿದೆ. ಮಧುಮಗಳ ಮನೆಗೆ ಬೀಗರ ಊಟಕ್ಕೆ ಬರುವ ಸಂಪ್ರದಾಯ, ಹಾಗೆ ಬಂದಿದ್ದಾರೆ.
ಬರುವಾಗ ಮಧುಮಗನ ಜೊತೆಯಲ್ಲಿ ಯಾರಾದರೂ ಒಬ್ಬರು ಬರುವುದು ಸಂಪ್ರದಾಯ. ಹೀಗೆ ಬಂದವರನ್ನು "ಪಾಸಾಡಿ" ಅಥವಾ "ಕುರುಂಟು" ಎನ್ನುತ್ತಾರೆ.
ಹಾಗೆ 'ಪಾಸಾಡಿ' ಅಥವಾ 'ಕುರುಂಟು' ಆಗಿ ಬಂದ ಯುವಕನೇ, ಮರುದೇವಿ ಅಮ್ಮನ ಮಗ "ಶಾಂತಿರಾಜ".
"ಶಾಂತಿ" ಮಡಿಕೇರಿ ಸಾಕಮ್ಮನ ಎಸ್ಟೇಟ್ನಲ್ಲಿದ್ದವರು ತನ್ನ ಮನೆಗೆ ಹೋಗದೆ, ತನ್ನ ಗೆಳೆಯರ ಮನೆಯ ಮಧುವೆ ಕಾರ್ಯಕ್ರಮಕ್ಕೆ ಬಂದಿದ್ದರು.
ಹೀಗೆ ವರನ ಜೊತೆ ವಧುವಿನ ಮನೆಗೆ "ಪಾಸಾಡಿ" ಬಂದವರನ್ನು ಗೋಳು ಹೊಯ್ದು ಕೊಳ್ಳುವುದು ತಮಾಷೆ ಮಾಡುವುದು ಸಾಮಾನ್ಯ. ಆದರೆ ಅದು ಇಲ್ಲಿ ಅತಿಯಾಗಿ ಹೋಯಿತು. ಆ ಮನೆಗೆ ಬಂದವರಲ್ಲಿ ಒಂದಷ್ಟು ಪುಂಡ ಯುವಕರ ಪಡೆಯು ಸೇರಿತ್ತು. ಇವರೆಲ್ಲ ಸೇರಿ, ಯಾರಿಗಾದರೂ ಕೀಟಲೆ ಮಾಡಿ ಸಂತೋಷ ಪಡುತ್ತಿದ್ದರು. ತಿಂದುಂಡು ನದಿಯಲ್ಲಿ ಈಜಾಡಿ ಉಂಡದ್ದನ್ನು ಕರಗಿಸಿ, ದಿನ ಕಳೆಯುತ್ತಿದ್ದರು. ನೆರೆಯ ಯುವಕರೊಂದಿಗೆ ಸನಿಹದ ನೇತ್ರಾವತಿ ನದಿಗೆ ಈಜಲು ತೆರಳುತ್ತಿದ್ದರು. ಈಜು ತಿಳಿದವರನ್ನು ನದಿ ಮದ್ಯಕ್ಕೆ ಸಣ್ಣ ತೆಪ್ಪದಲ್ಲಿ ಕೊಂಡು ಹೋಗಿ ಎಸೆದು ಬರುವುದು. ಅವರು ಕಷ್ಟ ಪಟ್ಟು ಈಜಿ ದಡ ಸೇರಿದಾಗ ಮತ್ತೆ ಅದೇ ರೀತಿ ಎಸೆದು ಬರುವುದು. ಹೀಗೆ ವಿಕೃತಿ ಮೆರೆದು ಒಂದು ರೀತಿಯ ಖುಷಿ ಪಡುತಿದ್ದರು.
ಅವರ ಕೈಯಿಂದ ತಪ್ಪಿಸಿಕೊಂಡವರು ಮತ್ತೆ ಇವರ ಕಣ್ಣಿಗೆ ಬೀಳುತ್ತಿರಲಿಲ್ಲ.
ಮದುವೆ ನಡೆದ ಮನೆಯಲ್ಲಿ ಇವರು
ತಮ್ಮದೇ ವಯಸ್ಸಿನ ಯುವಕನಾದ 'ಶಾಂತಿ'ಯನ್ನು. ತಮಾಷೆ ಮಾಡಿ ನಗುತಿದ್ದರು. ಕುಂತಲ್ಲಿ ಕೂರಲು ಬಿಡುತ್ತಿರಲಿಲ್ಲ. ಅದರಲ್ಲೂ 'ಪಾಸಾಡಿ' ' ಕುರುಂಟು' ಬಂದವನೆಂದು ತುಸು ಹೆಚ್ಚೆ.
ಒಂದು ದಿನ ಬೆಳಿಗ್ಗೆ ಸುಮಾರು 10 ಗಂಟೆ ಸಮಯ ಇರಬಹುದು. ಮನೆ ಮಂದಿ ಎಲ್ಲರು ಉಪಹಾರ ಸೇವಿಸಿದ ನಂತರ ಕುಳಿತು ತಮಾಷೆಯಾಗಿ ಮಾತನಾಡುತಿದ್ದರು. ಯಾರೋ ಒಬ್ಬರು " 'ಕುರುಂಟು' ಅಂದರೆ ಕೊರಂಟ್ (ಬೀಜ) ಎಂದರ್ಥ" ಎಂದರು. ಆಗ ಇನ್ನೊಬ್ಬರು, "ಹಾಗಾದರೆ 'ಶಾಂತಿ' ಬೀಜ, ಅವನನ್ನು ಗೋಣಿ ಚೀಲದಲ್ಲಿ ತುಂಬಿಸಿಡಬೇಕು " ಎಂದು ಬಿಟ್ಟರು. ಇದನ್ನು ಕೇಳಿ ಶಾಂತಿರಾಜ ನಗುತ್ತಿದ್ದ.
ಅಷ್ಟರಲ್ಲಿಯೇ ಅವರಲೊಬ್ಬ "ಕೊರಂಟು ಬೀಜವನ್ನು ಗೋಣಿಯಲ್ಲಿ ತುಂಬಿಸಿ ಇಡೋಣ" ಎನ್ನುತ್ತಾ,,, ಗೋಣಿ ಚೀಲ ಹುಡುಕಿ ತಂದೇ ಬಿಟ್ಟ. ಪುಂಡ ಯುವಕರು ಕೂಡಲೇ ಶಾಂತಿಯನ್ನು ಕೊಸರಾಡದಂತೆ ಗಟ್ಟಿಯಾಗಿ ಹಿಡಿದು ಕೈ ಕಾಲು ಮಡಚಿ ಗೋಣಿ ಚೀಲದಲ್ಲಿ ತುಂಬಿಸಿಯೇ ಬಿಟ್ಟರು.
ಶಾಂತಿರಾಜ ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ನಗುತ್ತಾ ಜೋರಾಗಿ ಕಿರುಚಾಡುತಿದ್ದ....
ಆದರೆ ಅದೇ ಅವನ ಕೊನೆಯ ನಗುವಾಗುತ್ತದೆ, ಎಂದು ಆ ಮುಗ್ದ ಯುವಕನಿಗೆ ತಿಳಿದಿರಲಿಲ್ಲ ! !
(ಮುಂದುವರಿಯುತ್ತದೆ )
ಕಾಮೆಂಟ್‌ಗಳು