ಮಗನನ್ನು ಕಳೆದುಕೊಂಡ ದುಃಖ್ಖ ಮತ್ತು ಅವನ ಆ ಕ್ರೂರ ಸಾವಿಗೆ ಕಾರಣ ಅದವರ ಮೇಲಿನ ಕೋಪ ಇವೆರಡು ಸದಾ ಕಾಲ ಅವರ ಮನಸ್ಸನ್ನು ಕೊರೆಯುತಿತ್ತು.
ಹೀಗೆ ವರುಷಗಳು ಉರುಳುತಿದ್ದವು. ಮರುದೇವಿಯವರು ದೊಡ್ಡ ಮಗಳು ಸರಸ್ವತಿಯನ್ನು ಅಟ್ಲೊಟ್ಟು ಮನೆತನದ ಅನಂತಯ್ಯ ಹೆಗ್ಡೆಯವರಿಗೆ ವಿವಾಹ ಮಾಡಿ ಕೊಟ್ಟರು.
ಮರುವರ್ಷವೇ ಸಣ್ಣ ಮಗಳು ಸುನಂದಳನ್ನು ಆಕೆಯ ಹದಿನಾರನೇ ವಯಸ್ಸಿನಲ್ಲಿ ಬಂಗಾಡಿ ಎಂಬಲ್ಲಿಯ ಮೆಚ್ಚಿಲಗುತ್ತು ಮನೆಯ ದೊಡ್ಡ ಜಮೀನುದಾರ ನಾಗರಾಜ ಆರಿಗರಿಗೆ ವಿವಾಹ ಮಾಡಿಕೊಟ್ಟರು. ನಾಗರಾಜ ಆರಿಗರಿಗೆ ಮೂರನೇ ಮದುವೆ ಮೊದಲೆರಡು ಹೆಂಡತಿಯರು ಮದುವೆಯಾಗಿ ಒಂದೇ ವರ್ಷದಲ್ಲಿ ಗರ್ಭಿಣಿಯರಾಗಿ ಪ್ರಸವ ಸಮಯದಲ್ಲಿ ತೀರಿಕೊಂಡಿದ್ದರು.
ಮರುದೇವಿಯವರು, ದೇವರಾಜರ ಒತ್ತಾಯದ ಮೆರೆಗೆ ಈ ಮದುವೆಗೆ ಒಪ್ಪಿಕೊಂಡಿದ್ದರು.
ಕೇವಲ ಆಸ್ತಿ ಇದೆ ಎಂದು ಸುಂದರಿಯಾದ, ಹದಿನಾರರ ಹರೆಯದ, ಹುಡುಗಿಯನ್ನು ಮೂರನೇ ಮದುವೆ ಆಗುವ ವರನಿಗೆ ಕೊಡುತ್ತಿದ್ದಾರೆ ಎಂದು ಅವತ್ತು ಊರವರು ಮಾತನಾಡಿ ಕೊಳ್ಳುತ್ತಿದ್ದರಂತೆ.
ಮದುವೆಯ ದಿನ ನೆರೆಯ ಮಹಿಳೆಯೊಬ್ಬಳು ಮಧು ಮಗಳನ್ನು ನೋಡಲು ಬಂದವಳು. " ಜೈನರು ಆಸ್ತಿಯೊಂದು ಇದ್ದರೆ, ಹುಲಿಗೂ ಹೆಣ್ಣು ಕೊಡುತ್ತಾರೆ" ಎಂದಿದ್ದಳಂತೆ.
ಮುಂದೆ ಒಬ್ಬಂಟಿಯಾದ ಮರುದೇವಿಯವರು, ಅಳಿಯ ನಾಗರಾಜ ಅರಿಗರ ಒತ್ತಾಯಕ್ಕೆ ಮಣಿದು. ಮಗಳ ಮನೆಯಾದ ಬಂಗಾಡಿಯ ಮೆಚ್ಚಿಲದಲ್ಲಿ ನೆಲೆಸಿದರು. ಮನೆಗೊಬ್ಬರು ಹಿರಿಯರು ಎಂಬಂತೆ, ಮರುದೇವಿ ಅಮ್ಮನಿಗೆ ಮಗಳ ಮನೆಯಲ್ಲಿ ಒಳ್ಳೆಯ ಸ್ಥಾನಮಾನ ಸಿಕ್ಕಿತು.
ಅಳಿಯ ನಾಗರಾಜ ಅರಿಗರು ಒಬ್ಬ ಸರಳ ಸಾತ್ವಿಕ ಗುಣದ ಮನುಷ್ಯ. ಆ ಕಾಲದಲ್ಲಿ ತಾಲೂಕಿನ ಎರಡು ಹೋಬಳಿಯ ನಾಲ್ಕು ಗ್ರಾಮಗಳಲ್ಲಿ ಜಮೀನು ಹೊಂದಿದ್ದ ದೊಡ್ಡ ಜಾಮೀನುದಾರರಾಗಿದ್ದರೂ ಕೂಡ ಯಾವುದೇ ಆಡಂಬರ ಇಲ್ಲದೆ ಸರಳತೆಯಿಂದ ಜೀವನ ನಡೆಸುತ್ತ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಇವರಿಗೆ ಅಂದಿನ ಕಾಲದಲ್ಲಿ ಬಂಗಾಡಿಯ ಕೊಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಶ್ರೇಷ್ಠ ಸಾಹಿತಿ ಶಿವರಾಮ ಕಾರಂತರ ಜೊತೆ ಉತ್ತಮ ಒಡನಾಟವಿತ್ತು
ಆರಿಗರು ತನ್ನ ಅತ್ತೆಯನ್ನು ಬಹಳ ಪ್ರೀತಿ ಗೌರವಗಳಿಂದ ನೋಡಿಕೊಂಡರು.
ಹೀಗೆ ದಿನಗಳು ಉರುಳುತ್ತಿದ್ದವು
ಅದು 1947ರ ಸಮಯ, ನಮ್ಮ ದೇಶವು ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡು ಪ್ರಜಾಪ್ರಭುತ್ವ ರಾಷ್ಟ್ರವಾಯಿತು.
ಈ ಸಂದರ್ಭದಲ್ಲಿ ಅಂಡಮಾನ್ ಮತ್ತು ಭಾರತದ ಜೈಲುಗಳಲ್ಲಿ ಇದ್ದ ಎಲ್ಲಾ ಕೈದಿಗಳನ್ನು ಬಿಡುಗಡೆಗೊಳಿಸಲಾಯಿತು. ವಿಪರ್ಯಾಸವೆಂದರೆ ಹಾಗೆ ಬಿಡುಗಡೆಗೊಂಡವರಲ್ಲಿ 'ಶಾಂತಿ'ಯನ್ನು ಕೊಂದ ಅಪರಾಧಿಗಳು ಇರಲೇ ಇಲ್ಲ.
*************
ವರುಷಗಳು ಉರುಳಿ ಹೋಗಿವೆ.
ಮೆಚ್ಚಿಲ ಮನೆ ತುಂಬಾ ಮೊಮ್ಮಕ್ಕಳು. ಮೊಮ್ಮಕ್ಕಳಿಗೆ ತನ್ನ ಜೀವನದಲ್ಲಿ ನಡೆದ ಎಲ್ಲಾ ನೋವಿನ ಕಥೆಗಳನ್ನು ಮರುದೇವಿಯಮ್ಮ ಹೇಳುತ್ತಿದ್ದರು.
ನಂತರ ಮರುದೇವಿಯವರು, ತನ್ನ ತಮ್ಮ ಪಟೇಲ ನೇಮಿರಾಜರ ವಿರುದ್ಧ ಅಮ್ಟುರಿನ ಅಸ್ತಿಯನ್ನು ಕುಟುಂಬದ ಎರಡು ತಲೆಮಾರಿನ ಎಲ್ಲಾ ಸದಸ್ಯರಿಗೂ ಸಮಪಾಲಿಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಅದೂ ತನ್ನ ಅಕ್ಕನ ಮಗ ದೇವರಾಜರ ಬಂಗರ ಒತ್ತಾಯದ ಮೆರೆಗೆ.
ಮರುದೇವಿ ಅಮ್ಮ ಯಾವಾಗಲು ಹೇಳಿ ಕೊಳ್ಳುತ್ತಿದ್ದರು. ನನಗೆ ಯಾವ ಆಸ್ತಿಯು ಬೇಡ. ಜೀವನದುದ್ದಕ್ಕೂ ನನಗಾದ ಅನ್ಯಾಯ, ಅವಮಾನ, ಪುತ್ರ ಶೋಕಗಳಿಗೆ ನ್ಯಾಯ ದೊರಕಲು ಸಾಧ್ಯವೇ ? ಎನ್ನುತಿದ್ದರು.
ಅಸ್ತಿಯ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು .
ಮರುದೇವಿ ಅಮ್ಮನಿಗೆ ಅರುವತ್ತೆರಡು ವರ್ಷ ವಯಸ್ಸಾಗಿತ್ತು. ಅರೋಗ್ಯವಾಗಿಯೇ ಇದ್ದರು.
ಒಂದು ದಿನ ಸಾಯಂಕಾಲ,
6 ಗಂಟೆಯ ಸಮಯ, ಮರುದೇವಿ ಅಮ್ಮ ಊಟ ಮಾಡುತ್ತಿದ್ದಾಗಲೇ ಹೊಟ್ಟೆ ಮತ್ತು ಎದೆ ನೋಯುತ್ತಿದೆ ಎಂದು ಕುಸಿದು ಕುಳಿತರು.
ಕುಸಿದು ಕುಳಿತವರೇ ನೆಲಕ್ಕೆ ಬಿದ್ದರು. ಬಟ್ಟಲಿನಲ್ಲಿ ಅರ್ಧ ಅನ್ನ ಹಾಗೆಯೇ ಇತ್ತು.
ಮನೆ ಮಂದಿಯೆಲ್ಲಾ ಓಡಿ ಬಂದರು, ಉಸಿರಾಟ ನಿಂತು ಹೋಗಿತ್ತು.
" ಮರುದೇವಿಯಮ್ಮ" ಎಂಬ ಸ್ವಾಭಿಮಾನದ ಪ್ರತಿರೂಪವೊಂದು ಧರೆಗೆ ಉರುಳಿ ಹೋಯಿತು.
ಅಮಾಯಕ ಯುವಕ "ಶಾಂತಿರಾಜ" ಮತ್ತು ಅವನ ಹಠವಾದಿ ತಾಯಿ "ಮರುದೇವಿ" ಅಮ್ಮ ಕಾಲದಲ್ಲಿ ಮರೆಯಾಗಿ ಹೋದರು.
(ಮುಗಿಯಿತು)
ಕಾಮೆಂಟ್‌ಗಳು