ನನ್ನ ಕಾಲೇಜು ದಿನಗಳ ಕನ್ನಡ ಪಂಡಿತ ಗುರುಗಳೊಬ್ಬರು, ಇತ್ತೀಚೆಗೆ ಅಪರೂಪಕ್ಕೆ ಸಿಕ್ಕಿದರು. ಹೀಗೆ ಕಷ್ಟ ಸುಖ ಸಮಾಚಾರ ಮಾತನಾಡುತ್ತ ನೇರವಾಗಿ ನನ್ನ ಮದುವೆ ಬಗ್ಗೆ ಕೇಳಿಯೇ ಬಿಟ್ಟರು. ನಾನದಕ್ಕೆ ತಮಾಷೆಗೆ ಅವರೊಡನಿದ್ದ ಸಲಿಗೆಯಿಂದ ಕಾವ್ಯಮಯ ಶೈಲಿಯಲ್ಲಿ ಉತ್ತರಿಸಿದೆ.
""ಮದುವೆ ಭಾವನೆಗಳ
ಸಾಗರ
ಅದು ಪ್ರೀತಿ ಪ್ರೇಮಗಳ
ಆಗರ
ಇದೀಗ ಸಮಸ್ಯೆಗಳು
ಸಾವಿರ
ಅದಕ್ಕೆ ನನಗಿಲ್ಲ ಗುರುಗಳೇ
ಆತುರ
ನಿಮಗ್ಯಾಕೆ ಅಷ್ಟೊಂದು
ಕಾತುರ ""
ಇಷ್ಟು ಹೇಳಿ ನಕ್ಕು ಅವರ ಮುಖ ನೋಡಿದೆ. ಇದನ್ನು ಕೇಳಿ ನನ್ನನ್ನು ನೋಡಿ ಕಣ್ಣರಳಿಸಿ ಹುಬ್ಬೇರಿಸಿ, ನನ್ನ ಶಿಷ್ಯ ಪಳಗಿದಾನೆ ಅನ್ಕೊಂಡಿರ್ಬೇಕು. ನನ್ನನ್ನೇ ನೋಡಿದರು. ಅವರ ಕಣ್ಣಲ್ಲಿ ಅಚ್ಚರಿ ಇದ್ದರೆ. ನನ್ನ ಕಣ್ಣಲ್ಲಿ ಗರ್ವವಿತ್ತು ಎಷ್ಟಾದರೂ ನಿಮ್ಮ ಶಿಷ್ಯನಲ್ಲವೇ ಎಂಬರ್ಥದಲ್ಲಿ... ಆದರೆ ಶಿಷ್ಯನೆದುರು ಗುರು ಸೋಲಬಾರದಲ್ಲವೇ, ಅವರು ಕಾವ್ಯಮಯ ಶೈಲಿಯಲ್ಲಿಯೇ ನನಗೆ ಕೊಟ್ಟ ಮರುತ್ತರ ಮತ್ತೂ ಸಾರಸ್ಯವಾಗಿತ್ತು.....
""ನನಗೂ ಏನಿಲ್ಲ
ಅವಸರ.
ನಿನ್ನ ಬಗ್ಗೆ ಪ್ರೀತಿಯ
ಕನಿಕರ.
ಒಳಿತಾಗಲೆಂಬ ಹಾರೈಕೆ
ಒಂಥರ.
ಮದುವೆಗೆ ಬೇಕಾಗಿಲ್ಲ
ಮುಜುಗರ.
ಸಿಗಲಿ ನಿನಗೆ ಸಂಗಾತಿ
ಸರಸರ "
ಕೊನೆಗೂ ಗುರುಗಳೆದುರು ನಾನು ಸೋಲಬೇಕಾಯಿತು. ಎಷ್ಟಾದರೂ ನನ್ನ ಗುರುಗಳಲ್ಲವೇ. 🙏
(ಎಮ್. ಜೆ )

ಕಾಮೆಂಟ್‌ಗಳು