"ಹವ್ಯಾಸಿ ಓದುಗನ ಮಧ್ಯದಲ್ಲೊಬ್ಬ ಬರಹಗಾರ ಅವಿತಿರುತ್ತಾನಂತೆ".
ನಾನು ಬರಹಗಾರನು ಅಲ್ಲ ಹವ್ಯಾಸಿ ಓದುಗನು ಅಲ್ಲ, ಆದರೂ...
ನನ್ನ ಹೈಸ್ಕೂಲು ಜೀವನದ ಮೊದಲ ವರ್ಷದ ನೆನಪುಗಳನ್ನು, ಅನೇಕ ವರ್ಷಗಳ ನಂತರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ... ಯಾಕೆಂದರೆ ನನ್ನ ಹೈಸ್ಕೂಲಿನ ಮೊದಲ ವರ್ಷದಲ್ಲಿ ನಮ್ಮ ತರಗತಿಯಲ್ಲಿ ನಡೆದ ಘಟನೆಯೊಂದು, ಮೊಗ್ಗಿನ ಮನಸ್ಸು ಚಲನ ಚಿತ್ರದ ಕತೆಯ ಒಂದು ಘಟನೆಗೆ ಸ್ವಲ್ಲ ಮಟ್ಟಿಗೆ ಹೋಲಿಕೆಯಾಗುತ್ತದೆ. ಅದೇನೆಂದು ತಿಳಿಯಬೇಕಿದ್ದರೆ, ಮುಂದೆ ಓದಿ.....
ನನಗಾಗ ಹದಿಮೂರರ ಹರೆಯ, ನಾನು ಓದಿದ್ದು, ಇತ್ತೀಚೆಗೆ ಶತಮಾನ ಕಂಡ ಪುತ್ತೂರಿನ ಪ್ರತಿಷ್ಠಿತ, ಕ್ಷಮಿಸಿ, ಪ್ರತಿಷ್ಠಿತ ಅಂದರೆ ಬೇರೆಯೇ ಅರ್ಥ ಬರುತ್ತದೆ. ಪುತ್ತೂರಿನ ಪ್ರಸಿದ್ಧ ಬೋರ್ಡು ಹೈಸ್ಕೂಲಿನಲ್ಲಿ, ಅಥವ ಸರಕಾರಿ ಹೈಸ್ಕೂಲು ಅಥವ ಕೊಂಬೆಟ್ಟು ಹೈಸ್ಕೂಲು ಎಂದು ಹೇಳಬಹುದು.
ಏಳನೆಯ ತರಗತಿ ಮುಗಿಸಿ ರಜಾದಿನದಲ್ಲಿ ಎಂಟನೆಯ ತರಗತಿಗೆ ನನ್ನನ್ನು ದಾಖಲು ಮಾಡಲಾಯಿತು. ಎಂಟನೆಯ ತರಗತಿಗೆ ಸಮವಸ್ರ್ತ ಖಾಕಿ ಪ್ಯಾಂಟ್ ಮತ್ತು ಬಿಳಿ ಅರ್ದ ತೋಳಿನ ಶರ್ಟ್ ಧರಿಸಿ ಉತ್ಸಾಹದಿಂದ ಹೋಗುತ್ತಿದ್ದೆ. ಅದೊಂದು ವಿಶಿಷ್ಟ ಅನುಭವ, ನಮ್ಮದು ಎಂಟನೆಯ ತರಗತಿಯಲ್ಲಿ ಆರು ವಿಭಾಗಗಳಿದ್ದವು. ಆರನೆಯ ವಿಭಾಗ 8 'ಎಫ್' ನಮ್ಮ ತರಗತಿ
ನಮ್ಮ ತರಗತಿಯಲ್ಲಿ ಬರೊಬ್ಬರಿ ನೂರಕ್ಕಿಂತಲು ಹೆಚ್ಚು ವಿದ್ಯಾರ್ಥಿಗಳಿದ್ದರು. ಬಹುಷ್ಯ 108 ಇರಬಹುದು ಸರಿಯಾಗಿ ನೆನಪಿಲ್ಲ. ನಮಗೆ ಇಬ್ರಾಹಿಂ ಎಂಬ ಪಿ.ಟಿ. ಮಾಸ್ಟ್ರು ಇದ್ದರು. ತರಗತಿಯಲ್ಲಿ ತಮಾಷೆ ಮಾಡಿ ನಮ್ಮನ್ನು ನಗಿಸಿ ಒಂದು ರೀತಿಯ ಜೋಶ್ ಮೂಡಿಗೆ ತರುತ್ತಿದ್ದರು. ನಮಗೆ ಧ್ಯಾನ ಮಾಡಲು ಕಲಿಸುತ್ತಿದ್ದರು. ವಿದ್ಯಾರ್ಥಿಗಳನ್ನು ಗೆಳೆಯರಂತೆ ನೋಡಿ ಕೊಳ್ಳುತ್ತಿದ್ದರು.
ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ನಮ್ಮನ್ನು ಅವರು ಕೌರವರೇ... ಎಂದು ಕರೆಯುತ್ತಿದ್ದರು.
ಇಲ್ಲಿ ಇಬ್ರಾಹಿಂ ಮಾಸ್ತರರ ಬಗ್ಗೆ ಮಾತ್ರ ಹೇಳುತ್ತಿದ್ದೇನೆ ಯಾಕೆಂದರೆ ಅವರದು ನೆನಪಿನಲ್ಲುಳಿಯುವ ವ್ಯಕ್ತಿತ್ವ.
ಹೀಗೆ ದಿನಗಳು ಉರುಳುತ್ತಿದ್ದವು. ಶೈಕ್ಷಣಿಕ ವರ್ಷದಲ್ಲಿ, ದೀಪಾವಳಿಗಿಂತ ಮೊದಲು ಬರುವ ಯಾವುದೋ ಒಂದು ತಿಂಗಳಿನ ಮಳೆಗಾಲದ ಒಂದು ದಿನ. ತರಗತಿಗೆ ಹೋದಾಗ ನಮಗೊಂದು ಆಶ್ಚರ್ಯ ಕಾದಿತ್ತು.
ನನ್ನ ಸಹಪಾಠಿ ಮಕ್ಕಳೆಲ್ಲ ಇವತ್ತು ರಜೆ ಎಂದು ಮಾತನಾಡಿ ಕೊಳ್ಳುತ್ತಿದ್ದರು. ಯಾಕೆ ರಜೆಯೆಂದು ಕೇಳಿದಾಗ ನಮ್ಮದೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿಷಯ ತಿಳಿದು ಬಂತು. ನನಗೆ ವಿದ್ಯಾರ್ಥಿನಿಯ ಹೆಸರು ತಿಳಿದಿತ್ತು ಮತ್ತು ಮುಖ ಪರಿಚಯ ಇತ್ತು.
ನಿಜ ಹೇಳುತ್ತೇನೆ ನನಗಾಗ ನಮ್ಮ ತರಗತಿಯ ವಿದ್ಯಾರ್ಥಿನಿ ಸತ್ತಳೆಂಬ ದುಃಖ ಇರಲಿಲ್ಲ. ಇವತ್ತು ಶಾಲೆಗೆ ರಜೆ ಎಂಬ ಸಂತೋಷದ ಜೊತೆ ವಿಷಯ ತಿಳಿದುಕೊಳ್ಳುವ ಕುತೂಹಲ.
ಕೊನೆಗೆ ಪ್ರಾಂಶುಪಾಲರು,,, (ಪ್ರಾಂಶುಪಾಲರೆ ಮುಖ್ಯೋಪಾದ್ಯಾಯರ ಕಾರ್ಯ ನಿರ್ವಹಿಸುತ್ತಿದ್ದರು.) ವಿದ್ಯಾರ್ಥಿ ಅಸೆಂಬ್ಲಿ ಕರೆದು ಮೌನ ಪ್ರಾರ್ಥನೆ ನಡೆಸಿ ರಜೆ ಘೋಶಿಸಿದರು.
ಕಡೆಗೂ ರಜೆಯಂತು ಸಿಕ್ಕಿದ ಸಂತೋಷದ ಮಧ್ಯೆ ನಮ್ಮ ತರಗತಿಯ ವಿದ್ಯಾರ್ಥಿಯೊಬ್ಬ ಮೆಲ್ಲಗೆ ನನ್ನಲ್ಲಿ ಹೇಳಿದ,
"ಸತ್ತ ವಿದ್ಯಾರ್ಥಿನಿಯು ತಾಯಿಯ ಜೊತೆ ಆಸ್ಪತ್ರೆಗೆ ಹೊಟ್ಟೆ ನೋವಿಗೆ ಔಷಧಿ ತರಲು ಹೋಗಿದ್ದವಳು ಡಾಕ್ಟರ್ ಪರೀಕ್ಷಿಸಿ ಹೊಟ್ಟೆನೋವಿಗೆ ಕಾರಣ ತಿಳಿಸುವ ಮೊದಲೇ ತಾಯಿಗಿಂತ ಮೊದಲು ಮನೆಗೆ ಬಂದು ಆತ್ಮ ಹತ್ಯೆ ಮಾಡಿಕೊಂಡಳಂತೆ, ಕಾರಣ.....
ಆಕೆ ಗರ್ಭಿಣಿ !!! ಎಂದು ವೈದ್ಯರು ತಿಳಿಸಿದರಂತೆ. "
ಬುದ್ಧಿ ಬಲಿತಿರದ ಎಳೆಯ ಪ್ರಾಯದಲ್ಲಿ ಯಾರದೋ ಕಾಮುಕನ ಕಾಮತೃಷೆಗೆ ಬಲಿಯಾದ ಆ ಅಪ್ರಾಪ್ತ ವಯಸ್ಸಿನ ಬಾಲೆಯ ಎಳೆಯ ಜೀವನ ಅಂತ್ಯವಾಯಿತು.
ಇದಕ್ಕೆ ಕಾರಣನಾದ ವ್ಯಕ್ತಿ ಯಾರೆಂದು ಗೊತ್ತಿಲ್ಲ. ಅವನು ಸತ್ತಿರಬಹುದೇ ??
ಅಥವಾ ನಮ್ಮ ನಿಮ್ಮ ಮಧ್ಯೆ ಸಮಾಜದಲ್ಲಿ ಬದುಕುತ್ತಿರಬಹುದೇ ??
ನನಗಂತು ಗೊತ್ತಿಲ್ಲ....
(ಮಿಥುನ್ ಜೈನ್)

ಕಾಮೆಂಟ್‌ಗಳು